ಮಹಮ್ಮದ್ ರಫಿ
	1924-80. ಹಿಂದಿ ಚಿತ್ರರಂಗದ ಶ್ರೇಷ್ಠಹಿನ್ನೆಲೆ ಗಾಯಕರ ಪೈಕಿ ಒಬ್ಬರು. ಇವರು ಈಗಿನ ಪಾಕಿಸ್ತಾನಕ್ಕೆ ಸೇರಿರುವ ಕೋಟ್ಲಾ ಸುಲ್ತಾನ್‍ಪುರದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ದೆೃವದತ್ತವಾಗಿ ಬಂದ ಸಂಗೀತ ಪ್ರತಿಭೆಯನ್ನು ಅಣ್ಣ ಹಮೀದ್ ಗುರುತಿಸಿ ಪೋಷಿಸಿದ. ತೀರ ಚಿಕ್ಕ ವಯಸ್ಸಿನಲ್ಲಿಯೇ ರಫಿಯವರಿಗೆ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಾದ ಉಸ್ತಾದ ಬಡೇಗುಲಾಮ್ ಅಲೀಖಾನ್‍ರ ಶಿಷ್ಯತ್ವ ಲಭಿಸಿತು. ಹದಿನೈದು ವರ್ಷದ ಬಾಲಕನಾಗಿದ್ದಾಗಲೇ ರಫಿ ಲಾಹೋರಿನ ಸಮಾರಂಭವೊಂದರಲ್ಲಿ ಹಾಡಿ ಸೈಗಲ್ಲರ ಆಶೀರ್ವಾದ ಪಡೆದಿದ್ದರು. ಆಗಾಗ ಸಭೆ ಸಮಾರಂಭಗಳಲ್ಲಿ ಹಾಡುತ್ತಿದ್ದರೂ ಚಲನ ಚಿತ್ರಗಳಲ್ಲಿ ಹಿನ್ನೆಲೆ ಗಾಯಕನಾಗಿ ಹಾಡುವ ಮೊದಲ ಅವಕಾಶ ಇವರಿಗೆ ದೊರೆತದ್ದು 28-2-1944ರಂದು. ಅಂದು ಲಾಹೋರಿನಲ್ಲಿ ಸಂಗೀತಗಾರ ಶ್ಯಾಮ ಸುಂದರರ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ಗುಲ್ ಬಲಾಟ್ ಎಂಬ ಚಿತ್ರಕ್ಕಾಗಿ ಇವರು ಹಾಡಿದರು. ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ರಫಿಯವರ ಹಾಡು ಎಲ್ಲರ ಬಾಯಲ್ಲೂ ನಲಿದಾಡತೊಡಗಿತು. ಅದೇ ವರ್ಷ ನಿರ್ಮಿತವಾದ 'ಜುಗ್ನು ಚಿತ್ರದಿಂದಾಗಿ ಇವರ ಪ್ರತಿಭೆ ಮತ್ತಷ್ಟು ಬೆಳಕಿಗೆ ಬಂದಿತು. ಈ ಚಿತ್ರದಲ್ಲಿ ಇವರು ನೂರ್‍ಜಹಾನ್‍ರೊಂದಿಗೆ ಯುಗಳ ಗೀತೆಯನ್ನು ಹಾಡಿದ್ದರು. ಇದೇ ಸಮಯದಲ್ಲಿ ರಫಿಯವರ ಗೀತೆಗಳನ್ನು ಕೇಳಿ ಪ್ರಭಾವಿತರಾದ ಕಲಾವಿದ ನಜೀರರು ಇವರನ್ನು ಮುಂಬಯಿಗೆ ಆಮಂತ್ರಿಸಿದರು. ಅಲ್ಲಿ ರಫಿಯವರಿಗೆ ಶ್ಯಾಮ ಸುಂದರ ನಿರ್ದೇಶನದ ಮತ್ತೊಂದು ಚಿತ್ರ ಗಾವ್ ಕೀ ಗೋರೀ ಯಲ್ಲಿ ಹಾಡುವ ಅವಕಾಶ ದೊರೆಯಿತು. ಈ ಹಾಡುಗಳೂ ಸಾಕಷ್ಟು ಜನಪ್ರಿಯವಾದವು. ಹಿಂದೀ ಚಿತ್ರರಂಗದಲ್ಲೊಂದು ಸ್ಥಾನ ಕಲ್ಪಿಸಿಕೊಟ್ಟವರು ಸಂಗೀತ ನಿರ್ದೇಶಕ ನೌಷಾದರು. ಅವರು ರಫಿಯವರಿಗೆ ಪ್ರಾರಂಭದಲ್ಲಿ ಸಾಕಷ್ಟು ಪ್ರೋತ್ಸಾಹವಿತ್ತು , ಶಾಸ್ತ್ರೀಯ ಸಂಗೀತದ ಮೇಲೆ ರಫಿಯವರು ಹೊಂದಿದ್ದ ಪ್ರಭುತ್ವವನ್ನು ಬೆಳಕಿಗೆ ತಂದರು. ಸುಮಾರು 36 ವರ್ಷಗಳ ಕಾಲ ಹಿನ್ನೆಲೆ ಗಾಯಕರಾಗಿ ಹಾಡಿದ ರಫಿಯವರ ಧ್ವನಿ ಮುದ್ರಿತ ಗೀತೆಗಳ ಸಂಖ್ಯೆ ಎಷ್ಟೆಂಬುದು ಖಚಿತವಾಗಿ ತಿಳಿಯದು ಒಂದು ಅಂದಾಜಿನಂತೆ ಅದು 23,000 ಕ್ಕಿಂತ ಹೆಚ್ಚಾದರೆ ಇನ್ನೊಂದರಂತೆ 25,000 ಕ್ಕಿಂತಲೂ ಹೆಚ್ಚು. ಸ್ಥೂಲವಾಗಿ ಹೇಳುವುದಾದರೆ ಲತಾಮಂಗೇಶಕರರನ್ನು ಬಿಟ್ಟರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹಾಡಿದವರೆಂದರೆ ರಫಿಯವರೇ.

	ಚಿತ್ರಸಂಗೀತವನ್ನು ಜನಪ್ರಿಯಗೊಳಿಸುವುದರಲ್ಲಿ ಇವರ ಪಾತ್ರ ಹಿರಿದು. ಹಾಡುಗಳ ವೈವಿಧ್ಯದ ದೃಷ್ಟಿಯಿಂದ ಬಹುಶಃ ಬೇರಾರೂ ಇವರನ್ನು ಸರಿಗಟ್ಟಲಾರರು ಶಾಸ್ತ್ರೀಯ ಸಂಗೀತದಿಂದ ಆರಂಭಿಸಿ ಪಾಪ್ ಸಂಗೀತ ಪ್ರಕಾರವನ್ನೂ ಲೀಲಾಜಾಲವಾಗಿ ಹಾಡಬಲ್ಲ ಸಾಮಥ್ರ್ಯ ಇವರದಾಗಿತ್ತು, ಗಜಲ್, ಖವಾಲಿ, ಲೋಕಗೀತೆ ಮುಂತಾದ ಸಂಗೀತ ಪ್ರಕಾರಗಳು ರಫಿಯವರ ಕಂಠದಿಂದ ಹೊರಹೊಮ್ಮಿವೆ. ಈ ಒಂದೊಂದು ಸಂಗೀತ ಪ್ರಕಾರದ ಹತ್ತಾರು, ನೂರಾರು ಹಾಡುಗಳನ್ನು ಹೆಸರಿಸಬಹುದು. 'ಕಲ್ಪನಾ ಚಿತ್ರದ ಮನ ಮೊರಾ ಬಾವರಾ (ಭೈರವಿ), 'ಬೈಜೂ ಬಾವರಾ ಚಿತ್ರದ ಮನ ತಡಪತ ಹರಿ ದರಶನಕೊ ಆಜಾ (ಮಾಲಕಂಸ್) ದಿಲ್ ದಿಯಾ ದರ್ದ್‍ಲಿಯಾ ಚಿತ್ರದ ಕೋಯಿ ಸಾಗರ್ ದಿಲ್ ತೊ ಬಹಲಾತಾ ನಹೀ (ಕಲಾವತಿ), 'ದಿಲ್ ಏಕ್ ಮಂದಿರ್ ಚಿತ್ರದ ದಿಲ್ ಏಕ್ ಮಂದಿರ ಹೈ (ಜೋಗಿಯಾ) ಹೀಗೆ ಇನ್ನೂ ಎಷ್ಟೋ ಗೀತೆಗಳಲ್ಲಿ ಹಿಂದೂಸ್ಥಾನಿ ಸಂಗೀತ ಪದ್ಧತಿಯ ಹಲವಾರು ರಾಗಗಳನ್ನು ಅತ್ಯಂತ ಸಮರ್ಥವಾಗಿ ನಿರೂಪಿಸಿದ್ದಾರೆ. ಶಾಸ್ತ್ರೀಯ ಸಂಗೀತವನ್ನು ಚಿತ್ರಮಾಧ್ಯಮಕ್ಕೆ ಹೊಂದಿಕೊಳ್ಳುವಂತೆ ಬಳಸಿ ಕೊಂಡಿರುವುದು ರಫಿಯವರ ವೈಶಿಷ್ಟ್ಯ . ಅವರ ಗಜಲ್ ಮತ್ತು ಖವಾಲಿ ಹಾಡಿಕೆಯ ಉದಾಹರಣೆಗಳಾಗಿ 'ಗಜಲ್ ಮತ್ತು ಬರಸಾತ್ ಕೀ ರಾತ್ ಚಿತ್ರಗಳನ್ನು ಹೆಸರಿಸಬಹುದು. ಗಂಗಾ ಜಮುನಾ ಚಿತ್ರದ ನೈನ ಲಡ ಜಯಿರೇ ಎಂಬ ಹಾಡು ಲೋಕಗೀತೆಯ ಉತ್ತಮ ಮಾದರಿಯಾಗಿದೆ. 

	 ಉಚ್ಚಸ್ಥಾಯಿಯ ತುಂಬುಕಂಠ ಮತ್ತು ಭಾವಾಭಿವ್ಯಕ್ತಿ ಇವು ರಫಿಯರ ಜನ್ಮಜಾತ ವೈಶಿಷ್ಟ್ಯಗಳು. ಸಮಕಾಲೀನ ಹಿನ್ನೆಲೆಗಾಯಕರಾದ ಮನ್ನಾಡೆ, ತಲತ್‍ಮಹಮೂದ್, ಕಿಶೋರ್ ಕುಮಾರ್ ಮತ್ತು ಮುಖೇಶ್ ಇವರೆಲ್ಲರಿಗಿಂತ ಹೆಚ್ಚಾಗಿ ಉಚ್ಚಸ್ಥಾಯಿಯಲ್ಲಿ ಹಾಡಬಲ್ಲ ಕಂಠಸಾಮಥ್ರ್ಯ ರಫಿಯವರದಾಗಿತ್ತು. ಶೃಂಗಾರ, ವೀರ ,ಶೋಕ ಹೀಗೆ ಗೀತೆಯ ಭಾವ ಯಾವುದೇ ಇದ್ದರೂ ಅದನ್ನು ಸ್ವರಃ ಅನುಭವಿಸಿ ಹಾಡಿ ರಸಿಕರನ್ನು ನಗಿಸಿ, ಅಳಿಸಿ, ಕೆರಳಿಸುವ ಅನುಭೂತಿ ಮತ್ತು ಅಭಿವ್ಯಕ್ತಿ ಶಕ್ತಿ ಇವರಿಗಿತ್ತು. ಅತ್ಯಂತ ಸಾಮಾನ್ಯ ಎನ್ನಬಹುದಾದಂಥ ಗೀತೆಗಳೂ ರಫಿಯವರ ಕಂಠದ ಪುರುಷಸ್ಪರ್ಶದಿಂದ ಜನಪ್ರಿಯ ಹಾಡುಗಳಾಗಿವೆ. ಇವರ ಜನಪ್ರಿಯತೆ ಭಾರತದ ಎಲ್ಲೆಗಳನ್ನು ಮೀರಿ ಹೊರದೇಶಕ್ಕೂ ಹಬ್ಬಿತ್ತು. ಇವರು ಮೇಲಿಂದ ಮೇಲೆ ವಿದೇಶಗಳಿಗೆ ಹೋಗಿ ಹಾಡುತ್ತಿದ್ದರು. ಪ್ರಪಂಚಾದ್ಯಂತ ಜನ ಇವರನ್ನು ಬಲ್ಲವರಾಗಿದ್ದರೂ ವಿಶೇಷವಾಗಿ ಇಂಗ್ಲೆಂಡ್, ಮಧ್ಯಪ್ರಾಚ್ಯ, ಅಮೆರಿಕ ಮತ್ತು ಆಫ್ರಿಕಾ ದೇಶಗಳಲ್ಲಿ ಇವರ ಜನಪ್ರಿಯತೆ ಗಮನಾರ್ಹವಾಗಿತ್ತು. ಇವರು ಹಾಡಿರುವ ಹಿಂದೀ ಭಜನೆಗಳೂ ಜನಪ್ರಿಯವಾಗಿವೆ. ರಫಿಯವರ ಭಾವಾಭಿವ್ಯಕ್ತಿಗೆ ಉದಾಹರಣೆಯಾಗಿ ಸುನೋ ಸುನೋ ಎ ದುನಿಯಾ ವಾಲೊ ಬಾಪೂಜಿ ಕೀ ಅಮರ್ ಕಹಾನಿ ಎಂಬ ಹಾಡನ್ನು ಹೆಸರಿಸಬಹುದು.

	ರಫಿಯವರದು ಸರಳ ಮತ್ತು ಸ್ನೇಹ ಸ್ವಭಾವ. ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. ಅದಕ್ಕೂ ಮಿಗಿಲಾಗಿ ಕೋಟ್ಯಂತರ ರಸಿಕರ ಕಣ್ಮಣಿಯಾಗಿದ್ದರು. ಇವರ ಮಿತ್ರರು ಇವರನ್ನು ಸದ್ಗøಹಸ್ಥ, ಪುರುಷರತ್ನ, ಪರಿಪೂರ್ಣ ನಾಗರಿಕ, ಚಿತ್ರೋದ್ಯಮದ ಹಿರಿಯಮಿತ್ರ ಎಂದು ಹೊಗಳಿದ್ದಾರೆ. ರಫಿಯವರದು ಬಲು ಉದಾರ ಸ್ವಭಾವ ಸಹಾಯ ಬೇಡಿ ಬಂದವರನ್ನು ಎಂದೂ ನಿರಾಶೆಗೊಳಿಸಿದವರಲ್ಲ. ಅಲ್ಪ ಬಂಡವಾಳದ ನಿರ್ಮಾಪಕರು ಮತ್ತು ಹೊಸ ಸಂಗೀತ ನಿರ್ದೇಶಕರಿಗಾಗಿ ರಫಿಯವರು ಅತ್ಯಲ್ಪ ಸಂಭಾವನೆ ಪಡೆಯುತ್ತಿದ್ದರು. ಒಂದೊಂದು ಸಲ ಉಚಿತವಾಗಿಯೂ ಹಾಡುತ್ತಿದ್ದರು. ರಫಿಯವರು ಹಾಡಿದ ಕೊನೆಯ ಚಿತ್ರ ಆಸ್‍ಪಾಸ್. 31-7-1980 ರಂದು ರಫಿಯವರ ನಿಧನದೊಂದಿಗೆ ಚಲನಚಿತ್ರ ಸಂಗೀತದ ಚರಿತ್ರೆಯಲ್ಲಿ ಒಂದು ಯುಗ ಕೊನೆಗೊಂಡಿತು.	
	(ಕೆ.ಎಂ.ಬಿಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ